ಎಂಗೆಲ್ಕ್, ಗೆರ್ರಿಟ್
	1900-1940. ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ನಡುವಿನ ಕಾರ್ಮಿಕ ಕವಿಗಳಲ್ಲಿ ಪ್ರಮುಖ. ಒಂದನೆಯ ಮಹಾಯುದ್ಧದ ನಿರಾಸೆಯಿಂದ ಜರ್ಮನಿಯಲ್ಲಿ ದಲಿತ ಜನರ ವಕ್ತಾರರೆನಿಸಿದ ಕವಿಗಳ ಗುಂಪು ಮಾಕ್ರ್ಸ್‍ವಾದವನ್ನು ಒಪ್ಪಿಕೊಂಡಿತಷ್ಟೆ. ದಲಿತರ ಕಷ್ಟನಿಷ್ಠುರಗಳನ್ನೂ ಏಳಿಗೆಯ ವಿಧಾನಗಳನ್ನೂ ತಾನೇ ಕಾರ್ಖಾನೆಯ ಕಾರ್ಮಿಕನಾಗಿದ್ದ ಗೆರ್ರಿಟ್ ತುಂಬ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಹೆನ್ರಿಷ್ ಲೆರ್ಷ್, ಮ್ಯಾಕ್ಸ್ ಬಾರ್ಥೆಲ್ ಮತ್ತು ಗೆರ್ರಿಟ್-ಇವರು ಮಾಕ್ರ್ಸ್‍ವಾದದ ಜೊತೆಗೆ ಮಾನವವಾದವನ್ನೂ ತಮ್ಮ ಕಾವ್ಯಗಳಲ್ಲಿ ಒಡಮೂಡಿಸಿದ್ದಾರೆ. ಯುದ್ಧಪ್ರತಿಭಟನೆ ಮತ್ತು ಸಾಮಾಜಿಕ ಭ್ರಾತೃತ್ವಕ್ಕಾಗಿ ಇವರು ತಮ್ಮ ಕೃತಿಗಳಲ್ಲಿ ನಿರಂತರ ಪ್ರಚಾರಮಾಡಿದ್ದಾರೆ.

	ಗೆರ್ರಿಟ್ ಒಂದನೆಯ ಮಹಾಯುದ್ಧದಲ್ಲಿ ಪಶ್ಚಿಮ ಮುಂಚೂಣಿಯೊಂದರಲ್ಲಿ ಗಾಯಗೊಂಡು ಇಂಗ್ಲಿಷ್ ಆಸ್ಪತ್ರೆಯೊಂದರಲ್ಲಿ ಸತ್ತ.

	ರಿದ್‍ಮುಸ್ ಡೆಸ್‍ನಾಯನ್ ಐರೋಪಾ (1921), ಬ್ರೀಫ್‍ಡರ್‍ಲೀಬೆ (1926), ಫೆರ್‍ಮಾಕ್ಟನಿಸ್ (1937)- ಇವು ಈತನ ಮುಖ್ಯ ಕೃತಿಗಳು. ಕೊನೆಯದು ಯುದ್ಧಕ್ಕೆ ಸಂಬಂಧಿಸಿದ ದಿನಚರಿ ಮತ್ತು ಪತ್ರಗಳ ಸಂಕಲನ. 		
 (ಎಸ್.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ